Wednesday, December 18, 2019

ಮನುಜ ಧರ್ಮ

ಜಾತಿ ಧರ್ಮ ಭೇದ ಮರೆತು
ಪ್ರೀತಿಯಿಂದ ಬಾಳೋ ಮನುಜ
ಮನುಜ ಧರ್ಮವೇ ಮಿಗಿಲು
ಬೇರೆಲ್ಲಾ ಬದುಕಲಿ ನಶ್ವರ
               ಯಾವ ಜಾತಿ ರಕ್ತದ ಬಣ್ಣ?
               ಯಾವ ಜಾತಿ ಜೀವ ಜಲವೂ?
               ಯಾವ ಜಾತಿ ಜೀವ ವಾಯು?
               ಯಾವ ಜಾತಿ ಹೊತ್ತ ನೆಲವೂ?
ಉತ್ತರಿಸು ನಿನಗೆ ನೀನು
ದ್ವಂದ್ವತೆಯ ಪ್ರಶ್ನೆಗಳಿವು
ಸತ್ಯಾಸತ್ಯತೆಯ ಕುಲುಮೆಯಲಿ
ಜೀವನ ಸತ್ಯವ ನೀ ಶೋಧಿಸು
               ನಾಮ ಹಲವು ದೇವರೊಂದೇ
               ಪವಿತ್ರ ಗ್ರಂಥಗಳ ಸಾರವೊಂದೇ
               ಮನುಜ ಧರ್ಮವ ಮೀರಿದ
               ಧರ್ಮವಿಲ್ಲ ಈ ಭುವಿಯಲೀsss....





Wednesday, December 4, 2019

ಮದ್ಯಪಾನ ಸಾವಿಗೆ ಸೋಪಾನ

ಭಾವನೆಗಳೊಂದು ಅಲೆಯಂತೆ
ಅತಿಯಾದರೆ ಸುಳಿಯಂತೆ
ದಿಕ್ಕು ತಪ್ಪಿದ ನಾವೆಯಂತೆ
ಮುಳುಗುವುದೇ ಗತಿ ಟೈಟಾನಿಕ್ನಂತೆ

ಟೈಟಾನಿಕನ್ನು ಉರುಳಿಸಿತು ಐಸ್ಬರ್ಗ್
ಬಾಳನ್ನು ಉರುಳಿಸದೇ ಪೆಗ್
ತಿಳಿದರೂ ಹೊಲಸು ತಿನ್ನುವುದೊಂದೇ ಪಿಗ್
ಎಲ್ಲಕ್ಕಿಂತ ಆರೋಗ್ಯವೇ ಬಿಗ್ತಿಂಗ್

ಮದ್ಯಪಾನ ಸಾವಿಗೆ ಸೋಪಾನ
ದುಡುಕಿ ಹೆಜ್ಜೆ ಇಡದಿರಿ ಜೋಪಾನ
ಪ್ರಥಮ ಸೇವನೆ ಏನೋ ಕಂಪನ
ನೀಡುವುದು ನೋವ ಮರೆಸುವ ಹುಸಿ ಸಾಂತ್ವನ

ದಾಸರಾದರೆ ಬದುಕಿಗದುವೇ ಪಾಶಾಣ
ಕೈಬೀಸಿ ಕರೆಯುವುದು ಸ್ಮಶಾಣ
ಮರೆಯದಿರಿ ಪತಿಯಾಗಿತ್ತ ಪ್ರಮಾಣ
ಮಾಡದಿರಿ ಮುಗ್ಧ ಹೆಣ್ಣಿನ ಬಾಳ ಹರಣ

Tuesday, December 3, 2019

ಹೊಂಬೆಳಕು

ಅಂಧರ ಮನದಲ್ಲಿ ದೃಷ್ಟಿ ಬೆಳಕು
ಅಜ್ಞಾನಿ ಮನದಲ್ಲಿ ಜ್ಞಾನ ಬೆಳಕು
ಅನಾಥನ ಮನದಲ್ಲಿ ಮಮತೆ ಬೆಳಕು
ಮನದಂಗಳ ಬೆಳಗುವ ಹೊಂಬೆಳಕು

ಬಡವನ ಮನದಲ್ಲಿ ಭರವಸೆ ಬೆಳಕು
ಬಲ್ಲಿದನ ಮನದಲ್ಲಿ ಕರುಣೆ ಬೆಳಕು
ಮತಾಂಧನ ಮನದಲ್ಲಿ  ಏಕತೆ ಬೆಳಕು
ಮನದಂಗಳ ಬೆಳಗುವ ಹೊಂಬೆಳಕು

ಆಲಸಿ ಮನದಲ್ಲಿ ಪರಿಶ್ರಮ ಬೆಳಕು
ಪರಿಶ್ರಮಿ ಮನದಲ್ಲಿ ನೆಮ್ಮದಿ ಬೆಳಕು
ಸಾಧಕರ ಮನದಲ್ಲಿ ವಿಜಯ ಬೆಳಕು
ಮನದಂಗಳ ಬೆಳಗುವ ಹೊಂಬೆಳಕು

ಸಾಹಸಿ ಮನದಲ್ಲಿ ಶೌರ್ಯ ಬೆಳಕು
ಕೋಪಾಂಧನ ಮನದಲ್ಲಿ ತಾಳ್ಮೆ ಬೆಳಕು
ಅತೃಪ್ತನ ಮನದಲ್ಲಿ ತೃಪ್ತಿ ಬೆಳಕು
ಮನದಂಗಳ ಬೆಳಗುವ ಹೊಂಬೆಳಕು

Sunday, December 1, 2019

ನೇತ್ರದಾನ

ನೋವು- ನಲಿವಿನ ಬಾಳಿದು 
ಭಗವಂತನಿತ್ತ ಕಾಣಿಕೆ 
ಅಂಧಕಾರದ ಮನಗಳಿಗೆ 
ನಾವಾಗೋಣ ಹೊಂಬೆಳಕಿನ ದೀವಿಗೆ 
                                 ತನ್ನನ್ನು ತಾನೇ ಸುಟ್ಟುಕೊಂಡು
                                 ಬೆಳಕು ನೀಡುವುದು ದೀಪ 
                                 ನಮ್ಮ ಆತ್ಮದ ಬೆಳಕು 
                                 ನೀಗಲಿ ಅಂಧತ್ವ ಕೂಪ
ನೊಂದ ಬಾಳಿಗೆ ಬೆಳಕಾದರೆ 
ನಮ್ಮ ಜನುಮ ಸಾರ್ಥಕ 
ಜೀವಾಂತ್ಯದ ನಂತರವೂ ನೆನಪಾದರೆ 
ನಮ್ಮ ಆತ್ಮ ಸಂತುಷ್ಟಕ
                                  ಉಸಿರು ನಿಂತ ಮೇಲೆ
                                  ಕಾಯ ಮಣ್ಣಿನೊಳಗೆ 
                                  ಸತ್ತ ಮೇಲೂ ನೀನು
                                  ಬದುಕು ಮನಗಳೊಳಗೆ 
ನೀನು ಕೊಡುವ ದಾನ
ಅಂಧರ ಬಾಳ ಬೆಳಕು
ಒಯ್ಯಲಾರೆ ಏನ
ಕೊಟ್ಟು ಹೋಗು ಕಣ್ಣ
                                  ಸೇರದಿರಲಿ ಮಣ್ಣು
                                  ಕಣ್ಣು ಸೇರದಿರಲಿ ಮಣ್ಣು
                                  ಕೊಟ್ಟು ಹೋಗು ಕಣ್ಣು
                                  ಕಣ್ಣು ಸೇರದಿರಲಿ ಮಣ್ಣು
ಕೊನೆಯಾಗಲಿ ಕತ್ತಲೆಯ ಬದುಕು 
ನಮ್ಮ ದಾನಗಳಿಂದ 
ನೋಡಲಿ ಹೊಸ ಪ್ರಪಂಚ 
ನಮ್ಮ ಕಣ್ಣುಗಳಿಂದ 
                                ಅನ್ನದಾನ ಹಸಿವು ನೀಗಿದರೆ 
                                ರಕ್ತದಾನ ಜೀವ ಉಳಿಸುವುದು
                                ನೇತ್ರದಾನ ಜೀವನವನ್ನೇ ನೀಡುವುದು
                                ನೇತ್ರದಾನವಿದು ಶ್ರೇಷ್ಠದಾನ
    ಬನ್ನಿ ನಾವೆಲ್ಲಾ ಒಮ್ಮನಸ್ಸು ಮಾಡೋಣ